ಕಥಾರ್ : ಇದು ಮಧ್ಯ ಪ್ರಾಚ್ಯದಲ್ಲಿದೆ, ಸೌದಿ ಅರೇಬಿಯಗೆ ಹೊಂದಿಕೊಂಡಂತಿರುವ ಪರ್ಯಾಯ ದ್ವೀಪವಾಗಿದೆ.  ಪಶ್ಚಿಮದಲ್ಲಿ ಅರೇಬಿಯನ್ ಖಾರಿ (ಹಾವತ್ ಅಸ್ ಸಲ್ವ) ಮತ್ತು ಸೌದಿ ಅರೇಬಿಯ, ದಕ್ಷಿಣದಲ್ಲಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌, ವಾಯವ್ಯದಲ್ಲಿ ಬಹ್ರೇನ್ ಖಾರಿ ಮತ್ತು ಬಹ್ರೇನ್ ದ್ವೀಪ ಸಮುದಾಯ ಇದ್ದರೆ ಪುರ್ವದಲ್ಲಿ ಮತ್ತು ಉತ್ತರದಲ್ಲಿ ಪರ್ಷಿಯನ್ ಖಾರಿ ಕಂಡುಬರುತ್ತದೆ. 250 ಉ.ಅ. ಮತ್ತು 510 ಪು. ರೇ. ದಲ್ಲಿದೆ.

ಭೂಸ್ವರೂಪ: ಮಟ್ಟಸವಾದ ಬಂಜರು ಮರುಭೂಮಿಯನ್ನು ಹೊಂದಿದ್ದು ಮರಳು ಮತ್ತು ನುರಜುಗಲ್ಲುಗಳನ್ನು ಅತ್ಯಧಿಕವಾಗಿ ಹೊಂದಿದೆ.  ಇದರ ಒಟ್ಟು ವಿಸ್ತೀರ್ಣ 11,000 ಚ.ಕಿಮೀ. ಇದು 563 ಕಿಮೀ ಉದ್ದದ ತೀರ ಪ್ರದೇಶವನ್ನು ಹೊಂದಿದೆ.  24º52ದಿ ಉ. ದಿಂದ 26º12ದಿ ಉತ್ತರ ಅಕ್ಷಾಂಶದವರೆಗೂ, 50º48ದಿ ದಿಂದ 51º28ದಿ ಪುರ್ವ ರೇಖಾಂಶದವರೆಗೆ ಹಬ್ಬಿದೆ.  ಸಂಪುರ್ಣವಾಗಿ ಮರುಭೂಮಿಯಾಗಿದೆ. 
ವಾಯುಗುಣ: ಬೇಸಗೆಯು ಅತ್ಯಧಿಕ ಉಷ್ಣಾಂಶದಿಂದ ಕೂಡಿರುತ್ತದೆ. ಉಷ್ಣಾಂಶ 490ಸೆ. ಗಿಂತಲೂ ಅತ್ಯಧಿಕವಾಗಿದ್ದು ದೂಳಿನಿಂದ ಕೂಡಿದ ಬಿರುಗಾಳಿ, ಮರಳು ದೂಳು, ಸುಂಟರಗಾಳಿಗಳು ಸರ್ವ ಸಾಧಾರಣವಾಗಿದೆ. ತೀರ ಪ್ರದೇಶದ ಸ್ವಲ್ಪ ಭಾಗ ಮಾತ್ರ ಸಮುದ್ರಗಾಳಿಗಳಿಂದಾಗಿ ಸಾಧಾರಣ ಉಷ್ಣಾಂಶವನ್ನು ಪಡೆಯುತ್ತದೆ.  ಅತಿ ಕಡಿಮೆ ಮಳೆ 5-20 ಸೆಂಮೀ ಕಂಡುಬರುತ್ತದೆ.  ಇದು ಉಷ್ಣ ವಲಯದ ಮರುಭೂಮಿ ವಾಯುಗುಣವನ್ನು ಹೊಂದಿದೆ. 

ಸ್ವಾಭಾವಿಕ ಸಸ್ಯವರ್ಗ: ಅತಿ ಉಷ್ಣಾಂಶ ಹಾಗೂ ಮಳೆ ಇಲ್ಲದ ಕಾರಣ ಯಾವಬಗೆಯ ಸಸ್ಯವರ್ಗಗಳು ಕಂಡುಬರುವುದಿಲ್ಲ. 
ಜನಸಂಖ್ಯೆ 8,63,051 (2002).  ಪ್ರತಿ ಚ.ಕಿಮೀ ಗೆ 180 ಜನರು ಕಂಡುಬಂದು, ತೀರ ಪ್ರದೇಶದಲ್ಲಿ ಶೇ.89.9 ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಧರ್ಮ: ಮುಸ್ಲಿಮರು ಶೇ. 95 ಕಂಡುಬರುತ್ತಾರೆ. ಇದರಲ್ಲೂ ಕಥಾರೀಸ್ ಜನಾಂಗದವರು ಹೆಚ್ಚಾಗಿದ್ದಾರೆ. ಅಲ್ಲದೆ ಸುನ್ನಿ ಮುಸ್ಲಿಮರು ಇದ್ದಾರೆ.  ಹಿಂದು, ಕ್ರಿಶ್ಚಿಯನ್ ಧರ್ಮ ಅನುಯಾಯಿಗಳು ಇದ್ದಾರೆ. 
ಭಾಷೆ: ಆಡಳಿತ ಭಾಷೆ ಅರೆಬಿಕ್, ಜೊತೆಗೆ ಇಂಗ್ಲಿಷ್ ಬಳಕೆಯಲ್ಲಿದೆ.
ಉದ್ಯೋಗ: ತೀರಪ್ರದೇಶಗಳಲ್ಲಿ ಸ್ವಲ್ಪ ವ್ಯವಸಾಯ ಕಂಡು ಬರುತ್ತದೆ.  
ಕಾಳುಗಳು: ರೇ, ಬಾರ್ಲಿ, ಗೋದಿ, ಬಾದಾಮಿ, ಖರ್ಜೂರ, ಅಂಜೂರವನ್ನು ಬೆಳೆಯುತ್ತಾರೆ. 

ಪ್ರಾಣಿ ಸಾಕಾಣಿಕೆ: ತೀರಪ್ರದೇಶದಲ್ಲಿ ಒಂಟೆ, ಕುದುರೆ, ಕತ್ತೆ, ಹೇಸರಗತ್ತೆಗಳನ್ನು, ಒಳನಾಡಿನಲ್ಲಿ ಕುರಿ, ಮೇಕೆ, ಕೋಳಿಗಳನ್ನು ಸಾಕುತ್ತಾರೆ. 
ಗಣಿಗಾರಿಕೆ: ಇಲ್ಲಿಯ ಜನರ ಮುಖ್ಯ ಉದ್ಯೋಗ ಗಣಿಗಾರಿಕೆ.  ದೇಶದ ಆದಾಯವು ಗಣಿಗಾರಿಕೆಯನ್ನು ಅವಲಂಬಿಸಿದೆ. ಪೆಟ್ರೋಲಿಯಂ ಎಣ್ಣೆ, ಸ್ವಾಭಾವಿಕ ಅನಿಲಗಳ ನಿಕ್ಷೇಪವು ಅತ್ಯಧಿಕವಾಗಿದ್ದು ಹೊರ ತೆಗೆಯುವ ಕಾರ್ಯವು ಪ್ರಮುಖವಾಗಿದೆ. 
ಕೈಗಾರಿಕೆ: ರಾಷ್ಟ್ರೀಯ ತಲಾವರಮಾನಗಳೆಲ್ಲವು ಕೈಗಾರಿಕೆಯನ್ನು ಅವಲಂಬಿಸಿದೆ.  ಎಣ್ಣೆ ಶುದ್ಧೀಕರಣ (ಶೇ. 25.4), ರಾಸಾಯನಿಕಗಳು (ಶೇ. 24.4), ಗಿರಿಣಿ, ಸಿಮೆಂಟ್, ಪ್ಲಾಸ್ಟಿಕ್, ಜವಳಿ, ಚರ್ಮದ ಸಾಮಾನು ಪಾದರಕ್ಷೆ, ಪಿಂಗಾಣಿ ಸಾಮಾನು, ಬಣ್ಣ ಮುಂತಾದ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದೆ. 

ವ್ಯಾಪಾರ: ಕಥಾರ್ ಪ್ರಪಂಚದ ಮಾರುಕಟ್ಟೆಯಲ್ಲಿ ವ್ಯಾಪಾರ ಪ್ರಮುಖವಾಗಿದೆ. ಪೆಟ್ರೋಲಿಯಂ, ಸ್ವಾಭಾವಿಕ ಅನಿಲ, ಪಾದರಕ್ಷೆ, ರಾಸಾಯನಿಕ, ಪಿಂಗಾಣಿ ಸಾಮಾನು, ಬಣ್ಣ, ಪ್ಲಾಸ್ಟಿಕ್ ಮುಂತಾದವುಗಳನ್ನು ರಫ್ತುಮಾಡುತ್ತದೆ. ಆಮದು: ಆಹಾರ ಪದಾರ್ಥ, ಸಿದ್ಧ ಉಡುಪು, ಜವಳಿ, ಯಂತ್ರಗಳು, ಯಂತ್ರೋಪಕರಣ, ಔಷಧಿ, ಬೆಲೆಬಾಳುವ ಹರಳುಗಳು, ಎಲೆಕ್ಟ್ರಾನಿಕ್ಸ್‌ ಉಪಕರಣ, ರೇಡಿಯೋ, ಗಡಿಯಾರ, ದೂರದರ್ಶನ, ಟೆಲಿಫೋನ್ ಮುಂತಾದವುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇಂದು ಕಥಾರ್ನ ಆರ್ಥಿಕತೆ ಸಂಪುರ್ಣವಾಗಿ ಪೆಟ್ರೋಲಿಯಂ ಮತ್ತು ಸ್ವಾಭಾವಿಕ ಅನಿಲವನ್ನು ಅವಲಂಬಿಸಿದೆ.

ರಾಜಕೀಯ: ದೊಹಾ ರಾಜಧಾನಿ. ಜನಸಂಖ್ಯೆ 300,000 (2002). ಇದು ಸಂಪ್ರದಾಯ ನಿರಂಕುಶರಾಜರ ಮಾದರಿಯ ಸರಕಾರವನ್ನು ಹೊಂದಿದೆ. 1971 ಸೆಪ್ಟೆಂಬರ್ 3 ರಂದು ಇಂಗ್ಲೆಂಡ್ ಅಧೀನದಿಂದ ಸ್ವತಂತ್ರವಾಯಿತು. ಇದು 9 ಪುರಸಭೆಯನ್ನು ಹೊಂದಿದೆ. ಅವುಗಳೆಂದರೆ ಬಲಾಡಿಯಲ್, ಅಡ್ ಡಾವಾಯ್, ಅಲ್ಗುವಾಯುರಿಯ, ಅಲ್ ಜುಮಾಯಿಲ್ಯ, ಅಲ್ಕೌರಾ, ಅಲ್ರಯ್ಯಾನ್, ಅಲ್ವಕ್ರಾ, ಆಶ್ ಶಾಮಲ್, ಜರಾಯನ್, ಅಲ್ಬಟ್ನಾ, ಉಮಾ ಸಲಾಲ್ ಪ್ರದೇಶಗಳಾಗಿವೆ. ಉಮ್ಬಾಟ್, ದೊಹಾ, ಅಲ್ಕೌರಾ, ಅಲ್ ಜಮಾಲಿಯಾಗಳು ದೊಡ್ಡ ನಗರಗಳಾಗಿವೆ.
ಸಾರಿಗೆ: ಉತ್ತಮಸಾರಿಗೆ ವ್ಯವಸ್ಥೆಯನ್ನು ಹೊಂದಿದ್ದು ವಾಯು ಸಾರಿಗೆ ಅತ್ಯಂತ ಪ್ರಮುಖವಾಗಿದೆ. ರಸ್ತೆ ಸಾರಿಗೆಯಲ್ಲಿ ಒಂಟೆ, ಕುದುರೆ, ಕತ್ತೆಗಳು ಉಪಯೋಗದಲ್ಲಿವೆ.		(ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ